ವೆಬ್‍ಸ್ಟರ್, ನೋವ
	1758-1843. ಅಮೆರಿಕದ ಪ್ರಸಿದ್ಧ ನಿಘಂಟುಕರ್ತ ಹಾಗೂ ಪತ್ರಕರ್ತ. ಇವನು ಪಶ್ಚಿಮ ಹಾರ್ಟ್‍ಫೋರ್ಡ್ ಗ್ರಾಮದಲ್ಲಿ 1758 ಅಕ್ಟೋಬರ್ 16 ರಂದು ಜನಿಸಿದ. ಕನೆಕ್ಟಿಕಟ್ ರಾಜ್ಯಪಾಲ ಜಾನ್‍ವೆಬ್‍ಸ್ಟರ್ (1656) ಹಾಗೂ ಪ್ಲೇಮೌತ್ ಕಾಲೋನಿಯ ರಾಜ್ಯಭಾರ ನಿರ್ವಹಿಸಿದ (30 ವರ್ಷ) ವಿಲಿಯಮ್ ಬ್ರಾಡ್‍ಫೋರ್ಡನ ವಂಶಸ್ಥ.  ಇವನು ಯೇಲ್ ಕಾಲೇಜಿ ನಿಂದ ಪದವಿ ಪಡೆದು ಅನಂತರ ಕಾನೂನು ವ್ಯಾಸಂಗ ಮಾಡಿದನಲ್ಲದೆ, ಹಾರ್ಟ್ ಫೋರ್ಡ್ ನ್ಯಾಯಾಲಯದಲ್ಲಿ ಸ್ವಲ್ಪಕಾಲ ಸೇವೆ ಸಲ್ಲಿಸಿದ.  ಅನಂತರ ಉತ್ತರ ಯೇಲ್‍ನ ಗೋಶನ್ ಶಾಲೆಯಲ್ಲಿ ಶಿಕ್ಷಕ ನಾಗಿ ಸೇವೆ ಸಲ್ಲಿಸುತ್ತಿರುವಾ ಗಲೇ ಪ್ರಾಥಮಿಕ ಉಚ್ಚಾರಣಾ ಪುಸ್ತಕ ಸಂಗ್ರಹಿಸಿದ (1780). ಅನಂತರ ವ್ಯಾಕರಣ ಹಾಗೂ ವಾಚನ ಪುಸ್ತಕ ಗಳನ್ನು ಸಿದ್ಧಪಡಿಸಿದ. ಪ್ರಾಥಮಿಕ ಉಚ್ಚಾರಣಾ ಪುಸ್ತಕ ಅಮೆರಿಕದಲ್ಲಿ ಉತ್ಕøಷ್ಟ ಉಚ್ಚಾರಣೆ ಹಾಗೂ ಅಕ್ಷರ ಸಂಯೋಜನೆಗೆ ಸಹಾಯವಾಯಿತು. ಇದು 1900ರ ದಶಕದಲ್ಲಿ ಮಿಲಿಯ ಪ್ರಮಾಣದಲ್ಲಿ ಮಾರಾಟವಾಯಿತು. ಅಮೆರಿಕದಲ್ಲಿ ಮೊದಲು ಪುಸ್ತಕ ಹಕ್ಕಿನ ಕಾನೂನಿಗಾಗಿ ಹೋರಾಡಿದವರಲ್ಲಿ ಈತ ಮೊದಲಿಗ. ಇವನು ಫೆಡರಲ್ ಗುಂಪಿನ (ಕ್ರಿಯಾಶೀಲ) ಸದಸ್ಯನಾಗಿದ್ದ. ಇವನು ಹಲವಾರು ರಾಜಕೀಯ ಭಿತ್ತಿಪತ್ರಗಳನ್ನು ಬರೆದ (1787). ಇವನು ಫೆಡರಲಿಸ್ಟ್ ಎರಡು ಗುಂಪಿನ ಪತ್ರಿಕೆಗಳ ಸಂಪಾದಕನಾಗಿದ್ದ. ಅನಂತರ ಈತ ಸಂಪೂರ್ಣವಾಗಿ ನಿಘಂಟು ರಚನೆಯಲ್ಲಿ ತೊಡಗಿಸಿಕೊಂಡ (1803). ತರುವಾಯ ಇವನು ತನ್ನ ಮೊದಲ ನಿಘಂಟನ್ನು ಪ್ರಕಟಿಸಿದ (1806). ಅನಂತರ ಆ್ಯನ್ ಅಮೆರಿಕನ್ ಡಿಕ್ಷ್‍ನರಿ ಆಫ್ ದ ಇಂಗ್ಲಿಷ್ ಲಾಂಗ್ವೇಜ್ ಎಂಬ ನಿಘಂಟನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ (1828). ಅನಂತರ ಇದು ಪರಿಷ್ಕರಣೆಗೊಂಡು 12,000 ಪದ ಹಾಗೂ 40,000 ನಿರೂಪಣೆಗಳನ್ನೊಳಗೊಂಡ ಬೃಹತ್ ಗ್ರಂಥವಾಗಿ ಹೊರಬಂತು (1840). ಇಂಥ ಬೃಹತ್ ನಿಘಂಟು ಈ ಹಿಂದೆ ಪ್ರಕಟವಾಗಿರಲಿಲ್ಲ. ಇವನು 1843 ರಲ್ಲಿ ನಿಧನ ಹೊಂದಿದ. ಇವನ ನಿಧನಾನಂತರ ಇವನ ನಿಘಂಟು ವೆಬ್‍ಸ್ಟರ್ಸ್ ಡಿಕ್ಷ್‍ನರಿ ಎಂದೇ ಪ್ರಸಿದ್ಧವಾಯಿತು.

	ಪ್ರಸ್ತುತ ಇದು ವೆಬ್‍ಸ್ಟರ್ಸ್ ಥರ್ಡ್ ನ್ಯೂ ಇಂಟರ್ ನ್ಯಾಷನಲ್ ಡಿಕ್ಷ್‍ನರಿ ಎಂಬ ಹೆಸರಿನಿಂದ ಪರಿಷ್ಕøತಗೊಂಡಿದೆ. ಇವನ ನಿಧನಾನಂತರ ಇವನ ಉತ್ತರಾಧಿಕಾರಿಗಳು ಇದರ ಹಕ್ಕನ್ನು ಸ್ಪ್ರಿಂಗ್ ಫೀಲ್ಡ್ ಮಾಸನ್‍ನ “ದ ಜಿ. ಅಂಡ್ ಸಿ ಮೆರಿಯಮ್ ಕಂಪನಿ”ಗೆ ಮಾರಿದರು.								
	(ಸಿ.ಎಸ್.ಪಿ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ